ಸುದ್ದಿ

ಪ್ರೀತಿಯ ಹೆಸರಲ್ಲಿ ಅಪ್ರಾಪ್ತೆಯ ಬೆನ್ನತ್ತಿ ಹೋಗುವುದು ಲೈಂಗಿಕ ಕಿರುಕುಳ: ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

Share It

ಮುಂಬೈ: ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಆಕೆ ಮುಂದೊಂದು ದಿನ ತನ್ನ ಪ್ರೀತಿ ಒಪ್ಪಿಕೊಳ್ಳುತ್ತಾಳೆ ಎಂದು ಅಪ್ರಾಪ್ತೆಯನ್ನು ಹಿಂಬಾಲಿಸಿ ಹೋಗುತ್ತಿದ್ದ 28 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ 1 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.

ಇದೇ ವೇಳೆ, ಪ್ರೀತಿಯಲ್ಲಿ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ನಂತರವೂ ಅಪ್ರಾಪ್ತೆಯನ್ನು ಹಿಂಬಾಲಿಸಿ ಹೋಗುವುದು ಒಳ್ಳೆಯ ನಡತೆಯಲ್ಲ ಮತ್ತು ಇಂತಹ ಕೃತ್ಯವು ಪೋಕ್ಸೊ ಕಾಯ್ದೆಯ ಸೆಕ್ಷನ್ 11 (vi) ಅಡಿಯಲ್ಲಿ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಟ್ಟಿದೆ. ಅಲ್ಲದೇ, ಅರ್ಜಿದಾರನಿಗೆ ಸ್ಪೆಷಲ್ ಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿದೆ.

ತನಗೆ ವಿಧಿಸಿರುವ ಶಿಕ್ಷೆಯನ್ನು ವಜಾಗೊಳಿಸುವಂತೆ ಕೋರಿ 28 ವರ್ಷದ ಮಿತುರಾಮ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎ ಸನಪ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸಂತ್ರಸ್ತ ಬಾಲಕಿ ನಿರಾಸಕ್ತಿ ತೋರಿಸಿದ ನಂತರವೂ ಆರೋಪಿ ಆಕೆಯನ್ನು ಮಾತನಾಡಿಸಲು, ಪುಸಲಾಯಿಸಲು ಪದೇ ಪದೇ ಬೆನ್ನತ್ತಿ ಹೋಗುತ್ತಿದ್ದುದು ಸಾಕ್ಷ್ಯಗಳಿಂದ ದೃಢಪಟ್ಟಿದೆ.

ಇಂತಹ ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 D (1) (i) ರ ಅಡಿ ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 11 (vi) ಅಡಿಯಲ್ಲಿ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 9ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಆರೋಪಿ ಪ್ರೀತಿಸುವುದಾಗಿ ಹೇಳಿಕೊಂಡು ಪದೇ ಪದೆ ಬೆನ್ನತ್ತಿ ಹೋಗಿ ಮಾತನಾಡಿಸುತ್ತಿದ್ದ. ಈ ವಿಚಾರವಾಗಿ ಬಾಲಕಿ ತನ್ನ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಳು. ಹಾಗಿದ್ದೂ, ಮುಂದೊಂದು ದಿನ ಬಾಲಕಿ ತನ್ನ ಪ್ರೀತಿ ಒಪ್ಪಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಆರೋಪಿ ಮತ್ತೆ ಬಾಲಕಿಯ ಬೆನ್ನತ್ತಿ ಹೋಗಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದ.

ಇದೇ ರೀತಿ ಬಾಲಕಿ ಟ್ಯೂಷನ್ ಗೆ ಹೋಗಿ ಬರುವ ವೇಳೆ ಆರೋಪಿ ಹಿಂದಿನಿಂದ ಹೋಗಿ ಬಾಲಕಿಯ ಕೈಹಿಡಿದೆಳೆದು ನಿಲ್ಲಿಸಿ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದ. ಸಿಟ್ಟಿಗೆದ್ದ ಬಾಲಕಿ ಆತನ ಕಪಾಳಕ್ಕೆ ಹೊಡೆದು ಮನೆಗೆ ಹೋಗಿ, ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು.
ನಂತರ ಘಟನೆ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಐಪಿಸಿ ಹಾಗೂ ಪೋಕ್ಸೊ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯ ಆರೋಪಿಗೆ 1 ವರ್ಷ ಜೈಲು ಹಾಗೂ 5 ಸಾವಿರ ದಂಡ ವಿಧಿಸಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದ.

ಮೂಲ-LAW TIME


Share It

You cannot copy content of this page