ಬೆಂಗಳೂರು:ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ಲಂಚ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ, ತಾಲ್ಲೂಕು ಕಚೇರಿ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸಿಬ್ಬಂದಿ ಗೂಗಲ್‌ಪೇ, ಫೋನ್‌ಪೇನಂತಹ ಯುಪಿಐ ಆ್ಯಪ್‌ಗಳ ಮೂಲಕ ಲಂಚ ಪಡೆಯುತ್ತಿದ್ದಾರೆಯೇ ಎಂಬುದರ ಪತ್ತೆಗೆ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ವಿಚಾರಣೆ ನಡೆಸಿದರು.
ನೆಲಮಂಗಲ ತಾಲ್ಲೂಕಿನ ವಿವಿಧ ಕಚೇರಿ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 14 ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
‘ನಗರಸಭೆ, ಭೂ ದಾಖಲೆಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಲಂಚ ಪಡೆಯುತ್ತಿರುವ ಬಗ್ಗೆ ದೂರು ಇತ್ತು. ಇದನ್ನು ಪರಿಶೀಲಿಸುವ ಸಲುವಾಗಿ ಸಿಬ್ಬಂದಿಯ ಫೋನ್‌ಗಳಲ್ಲಿ ಇದ್ದ ಯುಪಿಐ ಆ್ಯಪ್‌ಗಳಲ್ಲಿ ಆಗಿರುವ ಹಣ ವರ್ಗಾವಣೆಗಳನ್ನು ಪರಿಶೀಲಿಸಲಾಯಿತು. ಹಲವು ಸಿಬ್ಬಂದಿಯ ತಿಂಗಳ ವೇತನಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ಯುಪಿಐನಲ್ಲಿ ಅನುಮಾನಾಸ್ಪದವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಯಿತು’ ಎಂದು ನ್ಯಾಯಮೂರ್ತಿ ವೀರಪ್ಪ ಮಾಹಿತಿ ನೀಡಿದರು.
‘ಈ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಎಲ್ಲ ಸಿಬ್ಬಂದಿಯ ಯುಪಿಐ ಆ್ಯಪ್‌ಗಳಲ್ಲಿ ಆಗಿರುವ ಹಣಕಾಸು ವರ್ಗಾವಣೆಯ ವಿವರ ಮತ್ತು ಆ ಹಣ ಎಲ್ಲಿಂದ ಬಂತು ಎಂಬುದರ ವಿವರಗಳನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.