ಚಂಡೀಗಢ: ಹರ್ಯಾಣದ ಸರಕಾರಿ ಇಲಾಖೆಗಳು,
ಮಂಡಳಿಗಳು, ನಿಗಮಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ ಕಸ ಗುಡಿಸುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 46,000 ಮಂದಿ ಸ್ನಾತಕೋತ್ತರ ಹಾಗೂ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹರ್ಯಾಣ ಸರಕಾರ ಹೊರಡಿಸಿರುವ ಉದ್ಯೋಗ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಮಾಸಿಕ ರೂ. 15,000 ವೇತನ ನಿಗದಿಪಡಿಸಲಾಗಿದ್ದು, ಹುದ್ದೆಗಳ ನಿರ್ದಿಷ್ಟ ಸಂಖ್ಯೆಯನ್ನು ಪ್ರಕಟಿಸಲಾಗಿಲ್ಲ. ಈ ಹುದ್ದೆಗಳಿಗೆ ಸುಮಾರು 6,000 ಸ್ನಾತಕೋತ್ತರ ಹಾಗೂ ಸುಮಾರು 40,000 ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರೊಂದಿಗೆ 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಸುಮಾರು 1.2 ಲಕ್ಷ ಅಭ್ಯರ್ಥಿಗಳೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಹುದ್ದೆಗೆ ಬಂದ ಅರ್ಜಿಗಳ ಪೈಕಿ ಪದವೀಧರರೇ ಅತಿ ಹೆಚ್ಚುಪ್ರಮಾಣದಲ್ಲಿದ್ದಾರೆ. ಈ ಬಗ್ಗೆ ಉದ್ಯೋಗ ಆಕಾಂಕ್ಷಿ ಮನೀಶ್ ಕುಮಾರ್ ಮಾತನಾಡಿದ್ದು, ‘ನಾನು ಬಿಸಿನೆಸ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವೀಧರ, ನನ್ನ ಮಡದಿ ಶಾಲಾ ಶಿಕ ಶಿಕ್ಷಕಿ. ಇಬ್ಬರೂ ಅರ್ಜಿ ಹಾಕಿದ್ದೇವೆ. ನನ್ನ ಮಡದಿ ತಿಂಗಳೂ ಪೂರ್ತಿ ದಿನಕ್ಕೆ 9 ತಾಸು ದುಡಿದರೂ ಕೇವಲ10000 ರು. ಸಂಬಳ, ಅದೇ ಇಲ್ಲಿ 15000 ರು.ಕೊಡುತ್ತಾರೆ. ಜೊತೆಗೆ ಇಲ್ಲಿ ಇಡೀ ದಿನ ದುಡಿವ ಅಗತ್ಯ ಇಲ್ಲ. ಮಿಕ್ಕ ಸಮಯದಲ್ಲಿ ಬೇರೆ ಉದ್ಯೋಗ ಮಾಡಬಹುದಾಗಿದೆ’ ಎಂದು ಹೇಳಿದ್ದಾರೆ