ಸುದ್ದಿ

ಜಾತಿ ನಿಂದನೆ ಹಾಗೂ ಲಂಚ ಪ್ರಕರಣ: ಶಾಸಕ ಮುನಿರತ್ನ ಪೊಲೀಸ್ ಕಸ್ಟಡಿಗೆ

Share It

ಬೆಂಗಳೂರು: ಜಾತಿ ನಿಂದನೆ ಹಾಗೂ ಗುತ್ತಿಗೆದಾರನಿಗೆ ಲಂಚ ನೀಡುವಂತೆ ಒತ್ತಾಯಿಸಿದ್ದ ಆರೋಪದಡಿ ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ವಿಶೇಷ ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಜಾತಿ ನಿಂದನೆ ಹಾಗೂ ಲಂಚ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿರುವ ಶಾಸಕ ಮುನಿರತ್ನ ಅವರನ್ನು ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಪ್ರಕರಣದ ಮಾಹಿತಿ ಪಡೆದ ನ್ಯಾಯಾಧೀಶರು ಮತ್ತಷ್ಟು ತನಿಖೆಗಾಗಿ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಮುನಿರತ್ನ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಆಂಧ್ರಪ್ರದೇಶದ ತಿರುಪತಿಯತ್ತ ಪ್ರಯಾಣ ಬೆಳೆಸಿದ್ದ ಮುನಿರತ್ನ ಹಾಗೂ ಕಾರಿನ ಚಾಲಕನನ್ನು ಪೊಲೀಸರು ಕರ್ನಾಟಕ-ಆಂಧ್ರ ಗಡಿಯ ಜೆಎಸ್‌ಆರ್‌ ಟೋಲ್‌ ಬಳಿ ಶನಿವಾರ ಬಂಧಿಸಿದ್ದರು. ಸಂಜೆ ವೈಯಾಲಿಕಾವಲ್‌ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಿ, ಕೋರ್ಟ್ ಗೆ ರಜೆ ಇದ್ದುದರಿಂದ ಭಾನುವಾರ ‌ಬೆಳಗ್ಗೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

ನ್ಯಾಯಾಧೀಶರ ಎದುರು ಆರೋಪಿಯನ್ನು ಹಾಜರುಪಡಿದ ವೇಳೆ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಒಂದು ವಾರ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಇದೇ ವೇಳೆ ಮುನಿರತ್ನ, ತನ್ನ ಮನೆ ಸಮೀಪದಲ್ಲೇ ಠಾಣೆ ಇದ್ದು, ವಿಚಾರಣೆಗೆ ಕರೆದಿದ್ದರೆ ಹೋಗುತ್ತಿದ್ದೆ. ಆದರೆ ರಾಜಕೀಯ ದುರುದ್ದೇಶದಿಂದ ತನ್ನನ್ನು ಬಂಧಿಸಲಾಗಿದೆ. ನಾನೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಉಭಯಪಕ್ಷಗಾರರ ಮನವಿ ಆಲಿಸಿದ ನ್ಯಾಯಾಧೀಶರು ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಅಲ್ಲದೇ, ಆರೋಪಿ ಮುನಿರತ್ನಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ವೇಲು ದೂರು: ಪರಿಶಿಷ್ಟ ಜಾತಿಗೆ ಸೇರಿರುವ ವೇಲು ಎಂಬುವರು ಶಾಸಕ ಮುನಿರತ್ನ ವಿರುದ್ದ ದೂರು ನೀಡಿದ್ದು, ದೂರಿನಲ್ಲಿ  ತಾನು ಆದಿ ದ್ರಾವಿಡ (ಎಸ್‌ ಸಿ) ಜನಾಂಗಕ್ಕೆ ಸೇರಿದ್ದು, 2015ರಿಂದ 2020ರವರೆಗೆ ಲಕ್ಷ್ಮಿದೇವಿ ನಗರದ (ವಾರ್ಡ್‌-42) ಬಿಬಿಎಂಪಿ ಸದಸ್ಯನಾಗಿದ್ದೆ. ಕೆಲ ವಿಚಾರಗಳಲ್ಲಿ ಮುನಿರತ್ನ ಮತ್ತು ತನ್ನ ನಡುವೆ ಭಿನ್ನಾಭಿಪ್ರಾಯವಿದ್ದು, ಸ್ನೇಹಿತರ ಎದುರು ಮುನಿರತ್ನ ನನ್ನ ಜಾತಿ ನಿಂದನೆ ಮಾಡಿದ್ದರು. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ನನ್ನನ್ನು ರಾಜಕೀಯವಾಗಿ ಬೆಳೆಯಲು ಬಿಡಬಾರದು ಎಂದು ಹೇಳುತ್ತಿದ್ದರು. ಅಲ್ಲದೇ, ಮುನಿರತ್ನ ಲಂಚ ನೀಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಸ್ನೇಹಿತ ಚೆಲುವರಾಜು ಹೇಳಿದ್ದರು. ಲಂಚ ಕೊಡದಂತೆ ನಾನು ಅವರಿಗೆ ತಿಳಿಸಿದ್ದೆ. ನಂತರ ಮುನಿರತ್ನ ಅವರು ಚೆಲುವರಾಜು ಅವರನ್ನು ತನ್ನ ಕಚೇರಿಗೆ ಕರೆಸಿಕೊಂಡು ಜಾತಿ ನಿಂದನೆ ಮಾಡಿದ್ದಲ್ಲದೇ ಮನೆಯವರನ್ನೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ವೇಲುನಾಯ್ಕರ್‌ ಮಾತು ಕೇಳಿ ಕಮಿಷನ್‌ ಕೊಡುತ್ತಿಲ್ಲ ಎಂದು ಬೆದರಿಸಿದ್ದಾರೆ. ದಲಿತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದನ್ನು ತಾನು ಚೆಲುವರಾಜು ಆಡಿಯೊ ರೆಕಾರ್ಡ್‌ ಮಾಡಿದ್ದಾರೆ ಎಂದು ವೇಲು ದೂರಿನಲ್ಲಿ ಹೇಳಿದ್ದಾರೆ.

ಚೆಲುವರಾಜು ದೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಲಕ್ಷ್ಮಿದೇವಿ ನಗರದಲ್ಲಿ ಗಂಗಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದು, 2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಅವರ ಅಂಗರಕ್ಷಕ ವಿಜಯಕುಮಾರ್‌ ಕರೆ ಮಾಡಿ ಶಾಸಕರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಘನತ್ಯಾಜ್ಯ ಸಂಗ್ರಹಣೆ ಕೆಲಸಕ್ಕೆ 10 ಆಟೊ ರಿಕ್ಷಾ ಕೊಡಿಸುತ್ತೇನೆ. ಅದಕ್ಕೆ 20 ಲಕ್ಷ ಕೊಡುವಂತೆ ಮುನಿರತ್ನ ಬೇಡಿಕೆ ಇಟ್ಟಿದ್ದರು. ಸ್ನೇಹಿತರ ಬಳಿ ಸಾಲ ಪಡೆದು 20 ಲಕ್ಷ ಪಡೆದು ಅಂಗರಕ್ಷಕನ ಮೂಲಕ ಮುನಿರತ್ನ ಅವರಿಗೆ ತಲುಪಿಸಿದ್ದೆ. 2023ರ ಸೆಪ್ಟೆಂಬರ್‌ನಲ್ಲಿ ಆಪ್ತ ಸಹಾಯಕ ಅಭಿಷೇಕ್‌ನಿಂದ ಕರೆ ಮಾಡಿಸಿ ಕಚೇರಿಗೆ ಕರೆಯಿಸಿ, 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಲಕ್ಷ ರೂಪಾಯಿ ಸಾಲ ಪಡೆದು ಹೊಂದಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಹಾಗಿದ್ದೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಹಣ ತಂದುಕೊಂಡುವಂತೆ ಸೂಚಿಸಿದ್ದರು. ಮತ್ತೆ ಕಚೇರಿಗೆ ಕರೆಯಿಸಿದ್ದ ವೇಳೆ ಹಣ ತಂದಿಲ್ಲ ಎಂದಾಗ ಹಲ್ಲೆ ನಡೆಸಿದ್ದರು. ಐದು ವರ್ಷ ನಾನು ಶಾಸಕನಾಗಿರುತ್ತೇನೆ. ಹೇಳಿದಂತೆ ಕೇಳದಿದ್ದರೆ, ಹಣ ತಂದು ಕೊಡದಿದ್ದರೆ ಬೇರೆಯವರಿಗೆ ಗುತ್ತಿಗೆ ಕೆಲಸ ಕೊಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದಕ್ಕೆ ಅಭಿಷೇಕ್‌, ವಿಜಯಕುಮಾರ್‌ ಅವರೂ ಹಲ್ಲೆ ಮಾಡಿದ್ದರು ಎಂದು ಚೆಲುವರಾಜು ದೂರಿದ್ದಾರೆ. 


Share It

You cannot copy content of this page